ಸಿರಿ ತುಳುನಾಡಿನ ಒಂದು ವಿಶೇಷವಾದ ನಂಬಿಕೆಯಲ್ಲಿ ನಡೆಯುವ ಆರಾಧನೆ. ತುಳುನಾಡಿನ ಬೇರೆ ಆರಾಧನೆಯಾಗಿರುವಂತಹ ಭೂತಾರಾಧನೆ, ನಾಗಾರಾಧನೆ ಹಾಗೆಯೇ ಬೇರೆ ದೇವರ ಜಾತ್ರೆಗೆ ಹೋಲಿಸಿದರೆ ಸಿರಿ ಆರಾಧನೆಗೆ ಅದರದ್ದೇ ಆದ ಮಹತ್ವವಿದೆ. ಈ ಆರಾಧನೆಯಲ್ಲಿ ಹೆಂಗಸರು ಹೆಚ್ಚಾಗಿ ಸೇರುತ್ತಾರೆ. == ಸಿರಿ == ಸತ್ಯನಾಪುರದ ಅಜ್ಜ ಬಿರ್ಮು ಅಳ್ವರಿಗೆ ಹಿಂಗಾರದ ಎಸಳಿನಲ್ಲಿ ದೇವರ ಪ್ರಸಾದದ ರೂಪದಲ್ಲಿ ಸಿಕ್ಕಿದ ಹೆಣ್ಣು ಮಗು ಸಿರಿ. ಸತ್ಯನಾಪುರದ ಅಜ್ಜ ಬಿರ್ಮು ಆಳ್ವರು ಒಂದು ದಿನ ತನ್ನ ಅರಮನೆಯಲ್ಲಿ ತುಂಬಾ ದುಃಖದಲ್ಲಿ ಇರುತ್ತಾರೆ. ತನಗೆ ಬೇಕಾದ ಎಲ್ಲ ಸಂಪತ್ತು, ಐಶ್ವರ್ಯ ಉಂಟು, ಬೇಕಾದ ದಾನಧರ್ಮ ಮಾಡಿದೆ, ಆದರೆ ಈ ಅರಮನೆಯನ್ನು ನನ್ನ ನಂತರ ನೋಡಿಕೊಳ್ಳಲು ಒಂದು ಸಂತಾನ ಇಲ್ಲದೆ ಹೋಯಿತಲ್ಲ ಎಂದು ದುಃಖಿಸುತ್ತಾರೆ. ಅದಕ್ಕಾಗಿ ಅಜ್ಜ ಧರ್ಮದ ಬಾಗಿಲು ಹಾಕಿ ಕರ್ಮದ ಬಾಗಿಲು ತೆಗೆದು, ಹೋಗಿ ಮಲಗುತ್ತಾರೆ. ಇದು ಮೇಲೆ ಇರುವ ಬ್ರಹ್ಮದೇವರಿಗೆ ಗೊತ್ತಾಗಿ ಅವರು ಬಡಬ್ರಾಹ್ಮಣ ಮಾಣಿಯ ವೇಷ ತಾಳಿ ಸತ್ಯನಾಪುರದ ಅರಮನೆಗೆ ಭಿಕ್ಷೆ ಬೇಡಿಕೊಂಡು ಬರುತ್ತಾರೆ. ಆಗ ಕೆಲಸದವಳಾದ ದಾರು ಹೋಗಿ ಬ್ರಾಹ್ಮಣನಿಗೆ ಭಿಕ್ಷೆ ಕೊಡುತ್ತಾಳೆ. ಆಗ ಮಾಣಿ, "ನೀನು ಕೊಟ್ಟ ಭಿಕ್ಷೆ ನಾನು ಸ್ವೀಕರಿಸುವುದಿಲ್ಲ, ಈ ಮನೆಯ ಯಜಮಾನ ಬರಬೇಕು, ಅವರು ತನ್ನ ಸುಖ-ಕಷ್ಟ ನನ್ನಲ್ಲಿ ಹೇಳಬೇಕು ನನಗೆ ಅವರೇ ಭಿಕ್ಷೆ ಕೊಡಬೇಕು" ಎನ್ನುತ್ತಾರೆ. ನಂತರ ಅಜ್ಜ ಕತ್ತಲೆಯ ಕೋಣೆಯಿಂದ ಬಂದು ಮಾಣಿಗೆ ಭಿಕ್ಷೆ ಕೊಡುತ್ತಾರೆ. ಆಗ ಮಾಣಿಯು ಏನು ಅಜ್ಜ ನಿಮಗೆ ಯಾವ ಸಮಸ್ಯೆ ಎದುರಾಗಿದೆ ಎಂದು ಕೇಳುತ್ತಾರೆ. ಆಗ ತನಗೆ ಸಂತಾನ ಇಲ್ಲವೆಂಬುವ ಸತ್ಯ ಹೇಳುತ್ತಾರೆ, ಆಗ ಮಾಣಿಯು ನಿಮ್ಮ ಮೂಲ ಆಲಡೆ ಎಲ್ಲಿ ಎಂದು ಕೆಳುತ್ತಾರೆ, ಅಜ್ಜ ಗೊತ್ತಿಲ್ಲವೆಂದು ಹೇಳುತ್ತಾರೆ. ಆಗ ಮಾಣಿಯು ನಿನ್ನ ಆಲಡೆ ಲಂಕೆ ಲೋಕ ಎಂದು ತಿಳಿದಿದ್ದೇನೆ. ಆದರೆ ಅದು ಈಗ ಸರಿ ಇಲ್ಲ, ನೀನು ಅದನ್ನು ಸರಿ ಮಾಡಬೇಕು ಎಂಬ ಮಾತು ಹೇಳುತ್ತಾರೆ. ಅದರ ಪ್ರಕಾರ ಅಜ್ಜ ಜನರನ್ನು ಸೇರಿಸಿ ಲಂಕೆಲೋಕ ನಾಡಿನ ದೇವಸ್ಥಾನ, ಭೂತಗಳ ಕಟ್ಟೆಯನ್ನು ಸರಿಮಾಡುತ್ತಾರೆ. ಕೊನೆಗೆ ಪ್ರಸಾದ ರೂಪದಲ್ಲಿ ಹಿಂಗಾರದ ಎಸಳನ್ನು ಹಿಡಿಯುವಾಗ ಒಂದು ಹೆಣ್ಣು ಮಗಳ ಜನನವಾಗುತ್ತದೆ. ಅದೇ ಸತ್ಯದ ಸಿರಿ. == ಸಿರಿಯ ಪಲ್ಲ == ಅಂಗಡಿಜಾಲ ಬರ್ಕೆಯಲ್ಲಿ ಬಾಮುಕಲ್ಲೆರ್ ರವರು ಸಿರಿಗೆ ಉಡುಗೊರೆ ಆಗಿ ಕೊಟ್ಟ ಗದ್ದೆಗೆ ಸಿರಿ ಪಲ್ಲವೆಂದು ಹೆಸರು. ಸಿರಿ ಕೊಡ್ಸರ ಅಳ್ವರನ್ನು ಎರಡನೇ ಮದುವೆ ಆಗಿ ಕೊಟ್ರಾಡಿಗೆ ಹೋಗುತ್ತಾಳೆ. ಸ್ವಲ್ಪ ಸಮಯ ಕಳೆದ ನಂತರ ಅವಳು ಗರ್ಭಿಣಿಯಾಗುತ್ತಾಳೆ. ಅವಳನ್ನು ಮತ್ತು ತನ್ನ ತಂಗಿಯಾದ ಸಾಮು ಆಳ್ವೆದಿಯನ್ನು ಅಂಗಡಿಜಾಲ ಬರ್ಕೆಗೆ ಬಾಮುಕೆಲ್ಲೆರ್ ಅವರು ಕರೆಯುತ್ತಾರೆ. ಹಾಗಾಗಿ ಇಬ್ಬರು ಕಾಡು ದಾರಿಯ ಮೂಲಕ ನಡೆದುಕೊಂಡು ಬರುವಾಗ ಅಲಿಕುಂಜ ಪಿಲಿಕುಂಜ ಎಂಬುವಲ್ಲಿ ನಿಂತು ಇಲ್ಲಿಯ ಹೆಸರೇನು ಎಂದು ಸಿರಿ ಕೇಳುತ್ತಾಳೆ. ಅದಕ್ಕೆ ಸಾಮು ಇಲ್ಲಿಯ ಹೆಸರು ಹೇಳಿದರೆ ಗರ್ಭಿಣಿಯರಿಗೆ ಕೂಡಲೆ ಹೆರಿಗೆ ಆಗುತ್ತದೆ, ಗಬ್ಬ ಇರುವ ದನ ಕರು ಹಾಕುತ್ತದೆ ಇದು ಅಷ್ಟು ಕಾರಣಿಕವಾದ ಜಾಗ ಎಂದು ಹೇಳುತ್ತಾಳೆ. ಅದಕ್ಕೆ ಸಿರಿ ತುಂಬು ಗರ್ಭಿಣಿಯಾದ ಹೆಣ್ಣು ಹೆರಿಗೆಯ ದಿನ ಬಂದಾಗ ಹೆರದೆ ಇರುತ್ತಾಳೆಯೇ?, ನೀನೊಮ್ಮೆ ಇಲ್ಲಿಯ ಹೆಸರು ಹೇಳು ಎನ್ನುತ್ತಾಳೆ.ಹಾಗೂ ಹೇಳಬೇಕೆಂದರೆ ಹಿಂತಿರುಗಿ ಬರುವಾಗ ಹೇಳುತ್ತೇನೆ ಎಂದು ಸಾಮು ಹೇಳುತ್ತಾಳೆ. ಹಾಗೆ ಅಕ್ಕ ತಂಗಿ ಇಬ್ಬರು ಅಂಗಡಿಜಾಲ ಬರ್ಕೆಗೆ ಹೋಗಿ, ಅಲ್ಲಿಂದ ಹಿಂತಿರುಗಿ ಹೋಗಬೇಕಾದರೆ ಬಾಮುಕಲ್ಲೆರವರು ಸಿರಿಯನ್ನು ಕರೆದು ಸಿರೀ, ನಿನಗೆ ಕೊಡಲು ನನ್ನಲ್ಲಿ ಏನು ಇಲ್ಲ. ಈ ಎರಡು ಕಳಸ ಗದ್ದೆಯನ್ನು ಉಡುಗೊರೆ ಆಗಿ ತೆಗೆದುಕೊ ಎಂದು ಪ್ರೀತಿಯಿಂದ ಹೇಳುತ್ತಾರೆ. ಆ ಗದ್ದೆಗೆ ಸಿರಿಯ ಪಲ್ಲ ಎಂದು ಹೆಸರು. ಇಂದಿಗೂ ಅಂಗಡಿಜಾಲ ಬರ್ಕೆಯಲ್ಲಿ ಇದನ್ನು ಕಾಣಬಹುದು. ಅಲ್ಲಿಂದ ಹೊರಟು ಅದೇ ದಾರಿಯಲ್ಲಿ ಹಿಂದೆ ಬರುವಾಗ ಸಿರಿ ಆ ಕಾರಣಿಕ ಜಾಗದ ಹೆಸರು ಕೇಳುತ್ತಾಳೆ. ಅದು ಅಲಿಕುಂಜ ಪಿಲಿಕುಂಜ ಎಂದು ಸಾಮು ಹೇಳುವಾಗ ಸಿರಿಗೆ ಹೆರಿಗೆ ನೊವು ಕಾಣಿಸಿಕೊಂಡು ಸೊನ್ನೆಯನ್ನು ಹೆರುತ್ತಾಳೆ. ಆ ಜಾಗ ಈಗ ಸೊನ್ನೆ ಗುರಿಯೆಂದು ಕರೆಯಲ್ಪಡುತ್ತದೆ. ಸೊನ್ನೆಯನ್ನು ಹೆತ್ತು ಸಿರಿ ಪ್ರಾಣ ಬಿಟ್ಟ ಜಾಗ ಕೂಡಾ ಅದೇ ಆಗಿದೆ. == ಬಾಯಿ ಬಿಡಿಸುವುದು == ಸಿರಿ ಜಾತ್ರೆಯಲ್ಲಿ ಮೈಮೇಲೆ ಬಂದ ಹಲವಾರು ಹೆಣ್ಣು ಮಕ್ಕಳಿರುತ್ತಾರೆ. ಸಿರಿಜಾತ್ರೆ ಯಲ್ಲಿ ಹೊಸ ಸಿರಿಯರನ್ನು ಕುಮಾರನ ಮುಂದೆ ನಿಲ್ಲಿಸಿ ಅವರ ಮೇಲೆ ಬಂದಿರುವುದು ಸಿರಿಯೋ, ಸೊನ್ನೆಯೋ, ಗಿಂಡೆಯೋ ಎಂದು ತಿಳಿದುಕೊಳ್ಳುವ ಕೆಲಸಕ್ಕೆ ಬಾಯಿ ಬಿಡಿಸುವುದು ಎನ್ನುತ್ತಾರೆ. ಈ ಕೆಲಸವನ್ನು ಕುಮಾರ ದರ್ಶನ ಪಾತ್ರಿ ಅಥವಾ ಇತರೆ ಅನುಭವಿಗಳು ಮಾಡುತ್ತಾರೆ. ಕೆಲವೊಮ್ಮೆ ಅವರೇ ಬಾಯಿಬಿಟ್ಟು ಸೊನ್ನೆ, ಅಬ್ಬಗ, ದಾರಗ, ಸಿರಿ ಈ ರೀತಿಯಾಗಿ ತಮ್ಮ ಹೆಸರನ್ನು ಹೇಳುತ್ತಾರೆ. ಇಲ್ಲದೇ ಹೋದಲ್ಲಿ ಅವರ ಮೇಲೆ ಬಲ ಪ್ರಯೋಗ ಮಾಡಿ, ಅವರ ಮೇಲೆ ಬಂದಿರುವುದು ಯಾರೆಂದು ತಿಳಿದುಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಹಿಂಗಾರದ ಗುಚ್ಛದಿಂದ ಅವರಿಗೆ ಹೊಡೆಯಲಾಗುತ್ತದೆ. ಒಮ್ಮೆ ಅವರ ಮೇಲೆ ಬಂದಿರುವುದು ಯಾರೆಂದು ತಿಳಿದ ನಂತರ ಅವರಿಗೆ ಹಿಂಗಾರದ ಪುಷ್ಪವನ್ನು ನೀಡಲಾಗುತ್ತದೆ. ನಂತರ ಅವರು ಪ್ರತಿ ಸಿರಿ ಜಾತ್ರೆಗೆ ಬಂದು ದರ್ಶನ ಮಾಡಬೇಕಾಗುತ್ತದೆ. == ಸಿರಿ ದರ್ಶನ == ಸಿರಿದರ್ಶನವನ್ನು ನಾವು ಸಿರಿ ಆಲಡೆಗಳಲ್ಲಿ ಕಾಣಬಹುದು. ಕೆಲವು ಸಿರಿ ಆಲಡೆಗಳ ಹೆಸರು: ಉಡುಪಿ ಕಟಪಾಡಿ ಪಾಂಗಲ ಆಲಡೆ ಹಿರಿಯಡಕ ಆಲಡೆ ನಂದಳಿಕೆ ಆಲಡೆ ಬೊಳ್ಯೊಟ್ಟು ಆಲಡೆ ಕಬತ್ತಾರ್ ಆಲಡೆ. == ಉಲ್ಲೇಖಗಳು ==